ಆಧಾರಭಾವನೆ
	ಕ್ರಮೀಕೃತ ವಿವೇಚನೆಯಲ್ಲಿ (ಫಾರ್ಮಲ್ ರೀಸನಿಂಗ್) ತೀರ್ಮಾನವನ್ನು (ಕನ್‍ಕ್ಲೂಷನ್) ಸುಬದ್ಧವಾಗಿ ಎತ್ತಿ ಹಿಡಿಯುವ ನಿಯಮ (ಹೈಪಾಥಿಸಿóಸ್)-ಈ ತೀರ್ಮಾನ ಲಭಿಸಿದ್ದು ಈ ಕಾರಣದಿಂದಾಗಿರಬಹುದೇ ಎಂಬ ಊಹೆ ಅಥವಾ ಗುಮಾನಿ. ಉದಾಹರಣೆಗೆ ಸಮುದ್ರದ ಭರತ ಇಳಿತ ಎಂಬ ಭೌತಿಕ ಘಟನೆಯನ್ನು ಒಂದು ತೀರ್ಮಾನ ಎಂದು ಪರಿಗಣಿಸಬಹುದು. ಇದು ನೆರವೇರಲು ಕಾರಣಗಳೇನು ಎಂದು ಪ್ರಾಯೋಗಿಕವಾಗಿ ಪರೀಕ್ಷಿಸಿದಾಗ ಹಲವಾರು ದತ್ತಾಂಶಗಳನ್ನು ಸಂಗ್ರಹಿಸಬೇಕಾಗುತ್ತದೆ. ಇವನ್ನು ಕ್ರಮಬದ್ಧವಾಗಿ ಅಳವಡಿಸಿ ಕೂಲಂಕಷವಾಗಿ ಪರಿಶೀಲಿಸಿದಾಗ ಸ್ಫುರಿಸುವ ಊಹೆ ಆಧಾರಭಾವನೆ. ಅಂದರೆ, ಈ ಆಧಾರಭಾವನೆ ಊ. ಈ ತೀರ್ಮಾನ ಅ ಯನ್ನು ಸಕಾರಣವಾಗಿ ವಿವರಿಸುವುದು ಎಂದಂತಾಯಿತು. ಆದರೆ ಅ ಯ ಪೂರ್ಣವ್ಯಾಪ್ತಿಯನ್ನು ನಾವು ಗ್ರಹಿಸದೇ ಇದ್ದಿರಬಹುದು; ದತ್ತಾಂಶಗಳ ಸಂಗ್ರಹಣೆಯಲ್ಲಿ, ಮುಂದಿನ ಏರ್ಪಾಡಿನಲ್ಲಿ ಲೋಪದೋಷಗಳು ತೋರಿರಬಹುದು-ಇಂತಹ ಪ್ರತಿಯೊಂದು ಕೊರತೆಯೂ ಊ ನ್ನು ಅಷ್ಟಷ್ಟು ಅಸಮರ್ಪಕ ಮತ್ತು ದೋಷಪೂರಿತವಾಗಿಸುವುದು. ಆದ್ದರಿಂದ ಆಧಾರಭಾವನೆ ಊ ನ್ನು ಒರೆಗೆ ಹಚ್ಚಲು ತೀರ್ಮಾನ ಅ ಯನ್ನು ಕುರಿತು ಪುನಃ ಪುನಃ ಪರಿಶೀಲನೆ ನಡೆಸಬೇಕು. ಹಲವಾರು ಪ್ರಶ್ನೆಗಳಿಗೆ ಪ್ರಯೋಗಗಳಿಗೆ ಊನ್ನು ಒಳಪಡಿಸಬೇಕು. ಕೆಲವು ಪ್ರಶ್ನೆಗಳು ಹೀಗಿವೆ: ಗೊತ್ತಿರುವ ದತ್ತಾಂಶಗಳಿಗೆ ಸಂಗತವಾಗಿ ಊ ಇದೆಯೇ? ಅಸಂಗತವಾಗಿದ್ದರೆ ಊನ್ನು ಮಾರ್ಪಡಿಸಿ ಉಪಯುಕ್ತವಾಗಿಸಬಹುದೇ? ಇಂಥ ಮಾರ್ಪಾಡು ಸಮರ್ಥನೀಯವೇ? ಊನಿಂದ ಅನಿರೀಕ್ಷಿತ ಪರಿಣಾಮಗಳೇನಾದರೂ ದೊರೆಯುತ್ತವೆಯೇ? ಇಂಥವನ್ನು ಪ್ರತ್ಯಕ್ಷವಾಗಿ ಗುರುತಿಸಬಹುದೇ ಅಥವಾ ಪ್ರಯೋಗಮಂದಿರದಲ್ಲಿ ತಾಳೆನೋಡಬಹುದೇ? ಇನ್ನೊಂದು ಆಧಾರಭಾವನೆ ಊ' ಇದೇ ತೀರ್ಮಾನ ಅಯನ್ನು ಸಮರ್ಪಕವಾಗಿ ವಿವರಿಸಬಲ್ಲುದೇ? ಹೌದಾದರೆ ಊ ಮತ್ತು ಊ ಗಳಲ್ಲಿ ಯಾವುದನ್ನು ಆರಿಸಬೇಕು, ಏಕೆ? ಊ ಮತ್ತು ಊ' ಗಳಲ್ಲಿ ಸಾಂಗತ್ಯವಿದೆಯೇ?
	ಅಂತಿಮವಾಗಿ ಒಪ್ಪಿಗೆಯಾದ ಆಧಾರಭಾವನೆ ಸಿದ್ಧಾಂತ (ಥಿಯೊರಿ) ಎನ್ನಿಸುವುದು. 
	(ನೋಡಿ- ಅನುಗಮನ)								

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ